ಕುಚ್ಚಿಲಕ್ಕಿ ಲಡ್ಡು (How to make boiled rice laddu)

ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ 

ಎಲ್ಲರಿಗೂ ನನ್ನ  ನಮಸ್ಕಾರಗಳು ಇವತ್ತಿನ ದಿನ  ನಾವು ರುಚಿ ರುಚಿಯಾದ ಕುಚ್ಚಿಲಕ್ಕಿ ಲಡ್ಡುವನ್ನು ಮಾಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಿ ಒಂದರಿಂದ ಎರಡು  ತಿಂಗಳವರೆಗೆ ಶೇಖರಿಸಿ ಕೂಡ ಇಡಬಹುದು. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಒಂದು ಸಿಹಿ ತಿನಿಸು ಆಗಿದೆ. ಇದು ಆರೋಗ್ಯಕ್ಕೆ ಉತ್ತಮ ಕೂಡ.  ನೀವು ಕೂಡ ಇದನ್ನು ಮಾಡಿ ರುಚಿಯನ್ನು ಸವಿಯಿರಿ. 

ಕುಚ್ಚಿಲಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು 

  • ಕುಚ್ಚಿಲಕ್ಕಿ ( ಕೆಂಪು ಅಕ್ಕಿ ) - ೧ ಕೆ.ಜಿ 
  • ಹೆಸರು ಕಾಳು - ೧/೪ ಕೆ.ಜಿ 
  • ಬಿಳಿ ಎಳ್ಳು - ೧೦೦ ಗ್ರಾಂ 
  • ಬೆಲ್ಲ - ೧/೨ ಕೆ.ಜಿ 
  • ಗೋಡಂಬಿ - ೧೦೦ ಗ್ರಾಂ 
  • ಏಲಕ್ಕಿ ಪುಡಿ - ೧೦ ಗ್ರಾಂ 

ಕುಚ್ಚಿಲಕ್ಕಿ ಲಡ್ಡು ಮಾಡುವ ವಿಧಾನ 

 ಒಂದು ಕಾವಲಿಯಲ್ಲಿ ಕುಚ್ಚಿಲಕ್ಕಿಯನ್ನು ಚೆನ್ನಾಗಿ ಅರಳುವ ತನಕ ಹುರಿದುಕೊಳ್ಳಿ. ನಂತರ ಕಾವಲಿಯಲ್ಲಿ ಹೆಸರು ಕಾಳು ಸ್ವಲ್ಪ ಗಟ್ಟಿಯಾಗುವ ತನಕ ಹುರಿದುಕೊಳ್ಳಿ. ಹಾಗೆಯೆ ಎಳ್ಳನ್ನು ಕೂಡ ಸ್ವಲ್ಪ ಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಹುರಿದು ಕೊಂಡಿದ್ದ ಕುಚ್ಚಿಲಕ್ಕಿ ಮತ್ತು ಹೆಸರು ಕಾಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. 


 

ಈಗ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಬಿಸಿ ಮಾಡಲು ಇಡಿ, ಅದಕ್ಕೆ ಅರ್ಧ ಲೀಟರ್ ನೀರನ್ನು ಸೇರಿಸಿ ಚೆನ್ನಾಗಿ ಪಾಕ ಬರುವ ತನಕ ಕುದಿಸಿರಿ. ಆಗಾಗ ಚಮಚದ ಸಹಾಯದಿಂದ ಬೆಲ್ಲದ ಪಾಕವನ್ನು ಕಲಡಿಸಿರಿ. ಬೆಲ್ಲದ ಪಾಕ ರೆಡಿ ಆಗಿದೆಯೇ ಎಂದು ತಿಳಿಯಲು ಒಂದು ಚಮಚದಲ್ಲಿ ನೀರನ್ನು ತೆಗೆದುಕೊಂಡು, ಅದಕ್ಕೆ ಎರಡು ಹನಿ ಬೆಲ್ಲದ ಪಾಕವನ್ನು ಹಾಕಿ ಪರೀಕ್ಷಿಸಿ, ಬೆಲ್ಲದ ಪಾಕವು ನೀರಿನಲ್ಲಿ ಕರಗದೆ ಇದ್ದರೆ, ಅದು ಪಾಕ ಆಗಿದೆ ಎಂದರ್ಥ. ಬೆಲ್ಲದ  ಪಾಕ ಆದ ನಂತರ ಪಾತ್ರೆಯನ್ನು ಗ್ಯಾಸ್ ನಿಂದ ಕೆಳಗಿಳಿಸಿ, ಅದಕ್ಕೆ ಏಲಕ್ಕಿ ಪುಡಿ, ಚಿಕ್ಕ ಚಿಕ್ಕ ತುಂಡು ಮಾಡಿದ ಗೋಡಂಬಿ  ಮತ್ತು ಹುರಿದಿಟ್ಟ ಎಳ್ಳನ್ನು ಸೇರಿಸಿ ಚಮಚದ ಸಹಾಯದಿಂದ ಚೆನ್ನಾಗಿ ಕಲಡಿಸಿ. ನಂತರ ಪುಡಿ ಮಾಡಿಟ್ಟುಕೊಂಡ ಕುಚ್ಚಿಲಕ್ಕಿ ಮತ್ತು ಹೆಸರು ಕಾಳಿನ ಪುಡಿಯನ್ನು ಬೆಲ್ಲದ ಪಾಕಕ್ಕೆ ಸ್ವಲ್ಪ ಸ್ವಲ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಮಿಶ್ರಣವು ತಣ್ಣಗಾಗುವ ಮೊದಲೇ ಲಡ್ಡುವನ್ನು ಕಟ್ಟಿಕೊಳ್ಳಿ. ಅದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಈಗ ನಿಮಗೆ ರುಚಿ ರುಚಿಯಾದ ಕುಚ್ಚಿಲಕ್ಕಿ ಲಡ್ಡು ಸವಿಯಲು ಸಿದ್ದ.



Comments

Popular posts from this blog

ಚಂಪಾಕಲಿ (How to make champakali)

KFC ತರಹದ ಚಿಕನ್ ಲೆಗ್ ಪೀಸ್ (How to make KFC style chicken leg piece )

ಹಣ್ಣಿನ ಕಸ್ಟರ್ಡ್ ( How to make custard )